ಪೆಟ್ರೊಲ್. ಡೀಸೇಲ್ ಬೆಲೆ ಹೆಚ್ಚಾದ ಮೇಲೆ ಜನರ ಚಿತ್ತ ಇ-ವಾಹನಗಳತ್ತ ಹರಿದಿದೆ. ದಿನದಿಂದ ದಿನಕ್ಕೆ ಈ ವಾಹನಗಳ ಮಾರುಕಟ್ಟೆ ವಿಸ್ತಾರವಾಗುತ್ತಿದೆ. ಹೊಗೆ ರಹಿತ, ಖರ್ಚು ಕಡಿಮೆ ಮಾಡುವ ಸುಲಭ ಸಾರಿಗೆ ಯಾರಿಗೆ ಬೇಡ? ಕಾರು ಖರೀದಿಸುವ ಸಾಮರ್ಥ್ಯ ಇರುವವರೆಲ್ಲ ಇ-ಕಾರು ಖರೀದಿಗೆ ಹೊರಟಿದ್ದಾರೆ. ನೀವೂ ಸಹ ಇಲೆಕ್ಟ್ರಿಕ್ ಕಾರು ತೆಗೆದುಕೊಳ್ಳಬೇಕೆಂದಿದ್ದರೆ ಈ ಲೇಖನ ಉಪಯುಕ್ತವಾಗಿದೆ. ಪೂರ್ತಿ ಮಾಹಿತಿ ಇಲ್ಲಿದೆ ನೋಡಿ.
1. ಬೆಲೆ : ಚೆಂದ ಮತ್ತು ಸುಲಭ, ಈಗಲೇ ಹೋಗಿ ಖರೀದಿಸುತ್ತೇನೆ ಎಂದರೆ ಸುಲಭವಲ್ಲ. ಸಾಮಾನ್ಯ ಪೆಟ್ರೊಲ್, ಡೀಸೆಲ್ ಕಾರುಗಳಿಗೆ ಹೋಲಿಸಿದರೆ ಇವುಗಳು ದುಬಾರಿ. ವೈರುಗಳ ಕ್ಲಿಷ್ಟ ಜೋಡಣೆ ಮತ್ತು ದೊಡ್ಡ ಬೆಲೆಯ ಹೆಚ್ಚು ಸಾಮರ್ಥ್ಯದ ಬ್ಯಾಟರಿ ಬೇಕಾಗುವುದರಿಂದ ಇಲೆಕ್ಟ್ರಿಕ್ ಕಾರುಗಳ ಬೆಲೆ ಜೇಬಿಗೆ ಹೊರೆಯಾಗಬಹುದು. ಸಣ್ಣ ಹ್ಯಾಚ್ ಬ್ಯಾಕ್ ಕಾರೂ ಸಹ ಕನಿಷ್ಠ 6 ಲಕ್ಷ ರೂ. ಬೆಲೆಬಾಳುತ್ತದೆ. ಸರಕಾರಗಳು ಇವುಗಳಿಗೆ ಸಬ್ಸಿಡಿ ನೀಡುವುದಿಲ್ಲ.
2. ಪ್ರೋತ್ಸಾಹಧನ ಮತ್ತು ತೆರಿಗೆ ವಿನಾಯಿತಿ : ಸರಕಾರಗಳು ಇ-ಕಾರುಗಳಿಗೆ ಪ್ರೋತ್ಸಾಹಧನ ಮತ್ತು ತೆರಿಗೆ ವಿನಾಯತಿ ನೀಡುತ್ತವೆ. ಕೆಲವೊಂದು ಬ್ರಾಂಡುಗಳಿಗೆ ಜಿಎಸ್ ಟಿಯಲ್ಲಿ ಕಡಿತ/ರಹಿತ ಬೆಲೆ ನೀಡುತ್ತದೆ. ಅವುಗಳ ಬಗ್ಗೆ ಕೂಲಂಕಷವಾಗಿ ವಿಚಾರಿಸಿ ಇ-ಕಾರುಗಳನ್ನು ಖರೀದಿಸಬೇಕು.
3. ತಂತ್ರಾಂಶಗಳ ಗುಣಮಟ್ಟ ಮತ್ತು ಕಾಲಕಾಲಕ್ಕೆ ಉನ್ನತೀಕರಣ: ಇಲೆಕ್ಟ್ರಿಕ್ ಎಂದ ಮೇಲೆ ಅಲ್ಲಿ ಕಂಪ್ಯೂಟರ್ ತಂತ್ರಾಂಶಗಳ ಬಳಕೆ ಇದ್ದೇ ಇರುತ್ತದೆ. ಅದು ಕಾಲಕಾಲಕ್ಕೆ ನವೀಕರಣ/ ಉನ್ನತೀಕರಣ ಆಗಬೇಕಾಗುತ್ತದೆ. ಈ ಸೊಉಲಭ್ಯಗಳನ್ನು ಕೆಲವು ಕಾರು ಕಂಪನಿಗಳು ಖರೀದಿಯ ಮೊದಲು, ನಂತರ ಎರಡೂ ಸಮಯ ಉಚಿತವಾಗಿ ನೀಡುತ್ತವೆ. ಕೆಲವೊಂದಕ್ಕೆ ಖರೀದಿಯ ನಂತರ ಪುನಃ ಹಣ ಕೊಡಬೇಕಾಗುತ್ತದೆ. ಆದ್ದರಿಂದ ಇ-ಕಾರುಗಳನ್ನು ಖರೀದಿಸುವ ಮೊದಲು ಈ ಬಗ್ಗೆ ಸರಿಯಾಗಿ ತಿಳಿದುಕೊಂಡು ಆಯ್ಕೆ ಮಾಡಿ.
4. ಬ್ಯಾಟರಿ ಅವಧಿ: ಕಂಪನಿಗಳು ಹೇಳುವ ಚಾಲನಾ ಶ್ರೇಣಿಯನ್ನು ನಂಬಬೇಡಿ. ಬದಲಿಗೆ ವಾಸ್ತವದಲ್ಲಿ ಹೇಗೆ ಕೆಲಸ ಕೊಡುತ್ತದೆ ಎನ್ನುವುದಕ್ಕೆ ಪರಿಚಿತ ವಾಹನ ಮಾಲೀಕರು ಅಥವಾ ಜಾಲತಾಣಗಳಲ್ಲಿ ಬಳಕೆದಾರರ ಅಭಿಪ್ರಾಯಗಳನ್ನು (ರಿವ್ಯೂ) ಪರಿಗಣಿಸಿ. ಸಾಮಾನ್ಯವಾದ ಕಾರುಗಳು ಒಮ್ಮೆ ಪೂರ್ತಿ ಚಾರ್ಜ್ ಮಾಡಿದ ನಂತರ 100 ಕಿ.ಮೀ ಕೊಡುತ್ತವೆ. ಉನ್ನತ ಶ್ರೇಣಿಯ ಕಾರುಗಳು 400 ಕಿ.ಮೀರವರೆಗೂ ಚಾಲನೆ ಮಾಡಬಹುದಾಗಿರುತ್ತವೆ. ಆದರೆ ಅವುಗಳ ಬೆಲೆ ಹೆಚ್ಚು ಎನ್ನುವುದು ನೆನಪಿರಲಿ.
5. ಬ್ಯಾಟರಿ ಬಾಳಿಕೆ : ಒಳ್ಳೆಯ ಇ-ಕಾರಿನ ಇನ್ನೊಂದು ಲಕ್ಷಣ ಉತ್ತಮ ಬ್ಯಾಟರಿ ಬಾಳಿಕೆ. ಕಾರಿನ ಬಹಳ ಮುಖ್ಯ ಹಾಗೂ ಬೆಲೆಬಾಳುವ ಅಂಗ ಇದು. ಆದ್ದರಿಂದ ಬ್ಯಾಟರಿ ಬಾಳಿಕೆಯ ಬಗ್ಗೆ ಗ್ರಾಹಕರು ಏನು ಹೇಳುತ್ತಾರೆ? ಕಂಪನಿ ಏನು ಹೇಳುತ್ತದೆ ಎಂದು ತಿಳಿದುಕೊಂಡು ಖರೀದಿಸಿ. ಕಡಿಮೆ ಗುಣಮಟ್ಟದ ಬ್ಯಾಟರಿ ಇದ್ದರೆ ಪದೇ ಪದೇ ಬ್ಯಾಟರಿ ಬದಲಾಯಿಸಿ ಹಣ ಪೋಲಾಗುತ್ತದೆ. ಉತ್ತಮ ಬ್ಯಾಟರಿ ಇದ್ದರೆ ನಿರ್ವಹಣಾ ವೆಚ್ಚ ಕಡಿಮೆಯಾಗಿರುತ್ತದೆ. ಅಲ್ಲಿ ನೀವು ಹಣ ಉಳಿಸಬಹುದು.
6. ವಿಶೇಷತೆಗಳು : ಇ-ಕಾರುಗಳು ಹಲವು ಶ್ರೇಣಿಗಳಲ್ಲಿ ಬರುತ್ತವೆ. ಹೆಚ್ಚು ಶಕ್ತಿಯ ಮೋಟಾರುಗಳು, ಬ್ಯಾಟರಿಗಳ ದರ್ಜೆಗಳನ್ನು ಆಧರಿಸಿ ಶ್ರೇಣಿಗಳನ್ನು ಮಾಡಲಾಗಿರುತ್ತದೆ. ನಿಮ್ಮ ಬಳಕೆ, ಅವಶ್ಯಕತೆಯನ್ನು ಸರಿಯಾಗಿ ಅರ್ಥಮಾಡಿಕೊಂಡು ಈ ಶ್ರೇಣಿಗಳ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಕಾರು ನಿಮಗೆ ಬೇಕಾದ ಹಾಗೆ ಇಲ್ಲವಾದರೆ ಕಿರಿಕಿರಿ ಉಂಟಾಗುತ್ತದೆ. ಆದ್ದರಿಂದ ಕಾರು ಕೊಳ್ಳುವಾಗ ಕಾರಿನ ಬಗ್ಗೆ ಕೂಲಂಕಷವಾಗಿ ಕೇಳಿ ತಿಳಿದು ಕೊಂಡುಕೊಳ್ಲಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ